ಅಮ್ಮಾ.........
ಹೇಳಿತೊಂದು ಹಣ್ಣೆಲೆ
ತನ್ನ ಕಥೆಯ ನೋವಲೆ
ಬದುಕು ಬಾಳಿನಾಟದ
ಸಾರವೆಲ್ಲ ಕಣ್ಣಲೆ
ಬಳಸಿ ಎಸೆವ ಕಸದ ರೀತಿ
ತಿಪ್ಪೆಗೆಸೆದನೀ ನರ
ನನ್ನ ಕಷ್ಟ ನೀನೆ ತಿಳಿದು
ಸಂತೈಸು ವಾನರ
ಅತ್ತು ಅತ್ತು ಸಾಕಾಗಿದೆ
ಜಾರುತಿಲ್ಲ ಹನಿನೀರು
ಕರುಳ ಕುಡಿಗಳಿಟ್ಟ ನೋವ್ಗೆ
ಬತ್ತಿಹೋಯ್ತು ಕಣ್ಣೀರು
ಅಸೆಗಳ ಮೂಟೆಕಟ್ಟಿ
ಕನಸುಗಳ ಕಂತೆಕಟ್ಟಿ
ಹೊಕ್ಕಳನ್ನೊ ಬಳ್ಳಿಕೊಟ್ಟು
ಮಕ್ಕಳನ್ನೊ ಮೊಗ್ಗುಬಿಟ್ಟು
ನವಮಾಸ ಬಸಿರಲಿಟ್ಟು
ನೆತ್ತರಿಂದ ಉಸಿರಕೊಟ್ಟು
ಪ್ರೀತಿಯೊಂದೆ ಬಯಕೆಪಟ್ಟು
ನಾಳೆಗೊಂದ ನೆನಪು ಕೊಟ್ಟು
ಜೀವದೊಳಗೆ ಜೀವವಿಟ್ಟು
ತೊಟ್ಟಿಲೊಳಗೆ ಬದುಕನಿಟ್ಟು
ಹೆತ್ತೆನಲ್ಲ ಹರುಷಪಟ್ಟು
ಮಡಿಲತುಂಬಿ ಮಮತೆಕೊಟ್ಟು
ಚಂದ ಮಾಮ ತೋರಿಸಿ
ಕೈ ತುತ್ತು ತಿನಿಸಿದೆ
ಗುಮ್ಮನೆಂದು ಬೆದರಿಸಿ
ಲಾಲಿಹಾಡಿ ತೂಗಿದೆ
ಕೂಲಿನಾಲಿ ಮಾಡಿಯೆ
ಮುದ್ದಿನಿಂದ ಸಾಕಿದೆ
ಹೊಟ್ಟೆ ಬಟ್ಟೆ ಕಟ್ಟಿಯೆ
ಕೇಳಿದೆಲ್ಲ ಕೊಡಿಸಿದೆ
ಹರಯಪೂರ ದುಡಿದುದಣಿದು
ಆಳೆತ್ತರ ಬೆಳೆಸಿದೆ
ನೆರಳಾಗಲೆಂದು ಬಯಸಿ
ಶಾಲೆಗೂ ಕಳಿಸಿದೆ
ಎಲ್ಲರಂತೆ ಬಾಳಲು
ದಾರಿ ಕೂಡ ತೋರಿದೆ
ಬದುಕಿನಲ್ಲಿ ಚಂದದ
ನೆಲೆಗೆ ಹೊಕ್ಕ ಮೇಲೆ
ಮುತ್ತನಿಡಲು ಅಂದದ
ಮಡದಿ ಸಿಕ್ಕ ಮೇಲೆ
ಅಂತಸ್ತಿನ ಹೆಸರಲ್ಲಿ
ಮೂಲೆ ಗುಂಪು ನಾನಾದೆ
ನಡುಬಾಗಿದ ವಯಸಲ್ಲಿ
ಹೊರೆಯಾಗಿ ಹೋದೆ
ತೊಟ್ಟುಕಳಚಿ ಉದುರೊಮುನ್ನ
ಕೊನೆಯದೊಂದು ಆಶಯ
ತಲೆಯಸವರಿ ಮುತ್ತಿನಿಟ್ಟು
ಹಂಚಬೇಕು ಪ್ರೀತಿಯ..
ಆಸೆಗಣ್ಣಿನಿಂದ ನೋಡಿ
ಒಡಲ ಹೂವ ದಾರಿಯ
ಕಾದು ಕುಳಿತೆ ಕೇಳಲು
ಅಮ್ಮ ಅನ್ನೊ ಒಂದು ದನಿಯ.
ರಫ಼ಿ ರಿಪ್ಪನ್ ಪೇಟೆ
No comments: