ರೈತನ ಬವಣೆ
ರೈತನ ಬವಣೆ
ಬಿರುಬಿಸಿಲಿನ ಧಗೆ ಬೇಗೆಗೆ ಬತ್ತಿದ ನೆಲ
ಗುಡುಗು ಮಿಂಚಿನ ಹನಿ ಸಿಂಚನಕ್ಕೆ
ಹದವಾಗಿ ಹಸಿರಿಂದ ಕಂಗೊಳಿಸಲು ಕೃಷಿ
ಕಾಯಕಕ್ಕೆ ಇಳಿವ ಕಾತರದ ಕೃಷಿಕನು
ಅತಿವೃಷ್ಟಿ, ಅನಾವೃಷ್ಟಿ, ಅಕಾಲ, ಸಕಾಲದ
ವರ್ಷಧಾರೆಯ ಅವಾಂತರ, ಮಳೆ ಅವಲಂಬಿತ
ವರುಷದ ಬೇಸಾಯ ಬಳಲಿ ಬಸವಳಿದ
ಜಿರಾಯಿತನ ಬಾಳಲಿ ಜೂಜಾಡುವ ಮಳೆರಾಯ
ಜಡಿಮಳೆ ಗಾಳಿಯೆನ್ನದೆ ಹೊತ್ತಾರೆಯೆದ್ದು
ಜೋಡೆತ್ತುಗಳ ಹೆಗಲಿಗೆ ಜೊತ್ತಿಗೆ ಬಿಗಿದು
ಉತ್ತು ಬಿತ್ತಿ ನಾಟಿ ಮಾಡಿ ಪೋಷಿಸುತ್ತ
ಭವಿಷ್ಯದ ಕನಸನು ಕಾಣುವ ಅನ್ನದಾತ
ಪ್ರಕೃತಿ ವಿಕೋಪ ಪ್ರತಿಷ್ಠೆ ಪ್ರತಾಪಗಳ
ಕತ್ತರಿಯಲ್ಲಿ ಅಡಿಕೆಯಾದ ರೈತ ಕೊಳಕು
ತಳುಕಿನ ಮೊಸಳೆ ಕಣ್ಣೀರ ಕೋಡಿಯನ್ನು
ಅರಿತು ಅರಿಯದಂತೆ ನಿತ್ಯ ನಲುಗುವನು.
ಪವನ ಬಿರುಗಾಳಿಯ ಅಕಾಲ ಮಳೆಗೆ
ಫಲಭರಿತ ಬೆಳೆಗಳು ಮಣ್ಣು ಪಾಲಾಗಲು
ಬವಣೆಯ ಕೃಷಿಕನು ಕುಸಿವನು ಇಳೆಗೆ
ಚೇತರಿಸಲು ಸಿಲುಕುವ ಸಾಲಶೂಲದಲಿ
✒✒✒ - ರಫ಼ಿ ರಿಪ್ಪನ್ ಪೇಟೆ
No comments: