ಅಂತರಂಗದ ಚಳುವಳಿ....
ತಾಜ್ ಮಹಲ್ - ತೇಜೋ ಮಹಲ್,
ರಾಮ ಜನ್ಮಭೂಮಿ - ಬಾಬರಿ ಮಸೀದಿ
ಲಿಂಗಾಯತ - ವೀರಶೈವ,
ಟಿಪ್ಪು ಸುಲ್ತಾನ್ ದೇಶಪ್ರೇಮಿಯೋ - ದೇಶದ್ರೋಹಿಯೇ ?
ಈ ಪ್ರಶ್ನೆಗಳಿಗೆ ಉತ್ತರ ನಾನು ಕೊಡುತ್ತೇನೆ.
ಒಂದು ಷರತ್ತಿನ ಆಧಾರದ ಮೇಲೆ.!!!!!
ನನ್ನ ಈ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ.
1) ನೂರು ಗಿಡದ ಕೊತ್ತಂಬರಿ ಸೊಪ್ಪಿನ ಒಂದು ಕಟ್ಟು ಬೆಳೆಯಲು ಎಷ್ಟು ಮಾನವ ಶ್ರಮ, ಸಮಯ, ಹಣ ಖರ್ಚಾಗುತ್ತದೆ ಮತ್ತು ಅದನ್ನು ಬೆಳೆದವರಿಗೆ ವ್ಯಾಪಾರಿಗಳಿಗೆ ಹಾಗು ಗ್ರಾಹಕರಿಗೆ ಯಾವ ಬೆಲೆ ನಿಗದಿಪಡಿಸಬೇಕು ? ( ಇಲ್ಲಿ ಆಹಾರಕ್ಕಾಗಿ ಉಪಯೋಗಿಸುವ ಎಲ್ಲಾ ಹಣ್ಣು ತರಕಾರಿ ಬೇಳೆ ಎಲ್ಲವನ್ನೂ ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು )
2) ರೈತನೊಬ್ಬ ಬ್ಯಾಂಕಿನಿಂದ ಬಡ್ಡಿಗೆ ಸಾಲ ತಂದು 5 ಎಕರೆ ಜಮೀನಿನಲ್ಲಿ ಕಷ್ಟಪಟ್ಟು ಕೃಷಿ ಮಾಡುತ್ತಾನೆ. ಆದರೆ ಕಳಪೆ ಬೀಜದಿಂದಲೋ - ಅತೀವೃಷ್ಟಿಯಿಂದಲೋ - ಅನಾವೃಷ್ಡಿಯಿಂದಲೋ - ಆತ ನಷ್ಡಕ್ಕೀಡಾಗುತ್ತಾನೆ. ಈ ರೀತಿ ಸತತ ಎರಡು ಮೂರು ವರುಷ ಆದರೆ ರೈತ ಹೇಗೆ ತನ್ನ ತುಂಬು ಸಂಸಾರ ನಡೆಸಬೇಕು.
3) ಒಂದು ವೇಳೆ ಅದೃಷ್ಟವಶಾತ್ ಅತ್ಯುತ್ತಮ ಫಸಲು ಬಂದರೆ ಆ ಈರುಳ್ಳಿಯೋ ಬದನೆಕಾಯಿಯೋ ಇದ್ದಕ್ಕಿದ್ದಂತೆ ತನ್ನ ಬೇಡಿಕೆ ಕಳೆದುಕೊಂಡು ಚಿಲ್ಲರೆ ಕಾಸಿಗೆ ಬಿಕರಿಯಾದರೆ ಆತ ಸಾಯಲು ಯಾವ ಮಾರ್ಗ ಹುಡುಕಿಕೊಳ್ಳಬೇಕು ?
4) ಮಲಹೊರುವ - ಬೀದಿಗುಡಿಸುವ - ಗಣಿಯಲ್ಲಿ ಕೆಲಸಮಾಡುವ - ಮೂಟೆ ಎತ್ತುವ - ಅತ್ಯಂತ ಹೆಚ್ಚು ಶ್ರಮ ಪಡುವ ಮನುಷ್ಯರು ತಮ್ಮ ಸಹಜ ಆಯಸ್ಸು ಮುಗಿಯುವ ಮೊದಲೇ ಅನೇಕ ರೋಗರುಜಿನಗಳಿಗೆ ತುತ್ತಾಗಿ ಇಹಲೋಕ ತ್ಯಜಿಸುತ್ತಾರೆ.
ಅವರು ಈ ನೆಲದಲ್ಲಿ ಹುಟ್ಟಿದ್ದು ತಪ್ಪೇ ? ಸರಿಯೇ ?
5) ಯಾವನೋ ಕಾಮುಕನ ಕಾಮತೃಷೆಗೆ ಬಲಿಯಾಗುತ್ತಿರುವ ಅಸಂಖ್ಯಾತ ಹೆಣ್ಣುಗಳ ನರಕಯಾತನೆ ನಮ್ಮ ಕಣ್ಣಮುಂದೆಯೇ ಈ ನಾಗರಿಕ ಸಮಾಜದಲ್ಲಿ ನಡೆಯುತ್ತಿದೆ. ಇದನ್ನು ನಾವು ನವ ರಂಧ್ರಗಳನ್ನು ಮುಚ್ಚಿಕೊಂಡು ಸಹಿಸಿಕೊಂಡು ನಮ್ಮ ಪಾಡಿಗೆ ನಾವಿದ್ದೇವೆ ?
ಇಂತಹ ಸಮಾಜಕ್ಕೆ ನಾಗರಿಕತೆಗೆ ಏನೆಂದು ಹೆಸರಿಡಬೇಕು.?
ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಮತ್ತು ಪರಿಹಾರ ನೀಡಿದ್ದೇ ಆದರೆ ನಿಮ್ಮ ಮೇಲಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಮತ್ತು ಪರಿಹಾರ ನಾನು ಕೊಡುತ್ತೇನೆ.
ಅಲ್ಲಿಯವರೆಗೂ ದಯವಿಟ್ಟು ರೈತರ ಕೂಲಿಕಾರ್ಮಿಕರ ಮಹಿಳೆಯರ ಕನಿಷ್ಠ ಜೀವನಮಟ್ಟ ಉತ್ತಮಗೊಳಿಸುವ ಮಾರ್ಗಗಳ ಬಗ್ಗೆ ತಲೆಕೆಡಿಸಿಕೊಳ್ಳಿ.
ಚುನಾವಣೆ ಗೆಲ್ಲಲು ಜನರ ಓಟು ಗಳಿಸಲು ಪ್ರೀತಿಯ - ವಿಶ್ವಾಸಾರ್ಹತೆಯ - ಅಭಿವೃದ್ಧಿಯ ಮಂತ್ರಕ್ಕೆ ಬದಲಾಗಿ ಈ ರೀತಿಯ ದುಷ್ಟ ರಣತಂತ್ರಗಳಿಗೆ ಶರಣಾಗುವ ರಾಜಕಾರಣಿಗಳಿಂದ ಈ ಪ್ರಜಾಪ್ರಭುತ್ವದಲ್ಲಿ ಇನ್ನೇನು ನಿರೀಕ್ಷಿಸಲು ಸಾಧ್ಯ.
ಈಗ ಚೆಂಡು ನಮ್ಮ ಅಂಗಳದಲ್ಲಿಯೇ ಇದೆ. ಸರಿಯಾಗಿ ಗುರಿ ನೋಡಿ ಗೋಲು ಹೊಡೆಯುವುದನ್ನು ಕಲಿಯಬೇಕಿದೆ ಮತ್ತು ಕಲಿಸಬೇಕಿದೆ.
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ -
ಪರಿವರ್ತನೆ ಆಗಬೇಕಿದೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ರಫ಼ಿ.ರಿಪ್ಪನ್ ಪೇಟೆ
No comments: