Header Ads

Breaking News
recent

ಚೆ ಗುವೆರಾ ಬಗ್ಗೆ ನಿಮಗೆಷ್ಟು ಗೊತ್ತು..!!??che guvera



ಚೆ ಗುವೆರಾ.... 


 'ಯುದ್ಧ, ಯುದ್ಧ... ನಾವು ಯುದ್ಧವನ್ನು ವಿರೋಧಿಸುವವರು; ಒಮ್ಮೆ ಯುದ್ಧ ಮಾಡಿದ ಮೇಲೆ ಮುಗೀತು, ಬದುಕು ಯುದ್ಧದಲ್ಲಿ ಮುಗಿಯುತ್ತದೆ, ಯುದ್ಧ ಜರುಗುತ್ತಲೇ ಇರುತ್ತದೆ.'  ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಒಬ್ಬನಾದ ನೆರೂಡಾನ ಏಕೈಕ ಭೇಟಿಯ ಸಮಯದಲ್ಲಿ ಚೆಗುವಾರ ಹೇಳಿದ ಮಾತಿದು. ಆತ ಹೇಳಿದಂತೆ ತನ್ನ ಜೀವನವನ್ನು ಯುದ್ಧದಲ್ಲೇ ಮುಗಿಸಿಕೊಂಡ. 1967ನೇ ಇಸವಿ, ಅಕ್ಟೋಬರ್ 9ನೇ ತಾರೀಕು ಅಮೆರಿಕಾದ ದುಷ್ಟ ಅಧಿಕಾರಿ ಬಾಟಿಸ್ಟಾನ ಕ್ರೂರ ಪಡೆಗಳು ಅಕ್ರಮ ಕಾರ್ಯಾಚರಣೆ ನಡೆಸಿ, ಗೆರಿಲ್ಲಾ ಯುದ್ಧದಲ್ಲಿ ತೊಡಗಿದ್ದ ಕ್ರಾಂತಿಕಾರಿ ಆರ್ನೆಸ್ಟೋ ಚೆಗುವಾರನನ್ನು ಸೆರೆಹಿಡಿದು ತೀರಾ ಹತ್ತಿರದಿಂದ ಗುಂಡಿಕ್ಕಿ ಕೊಂದು ಅಟ್ಟಹಾಸ ಮೆರೆದ ದಿನ. ಚೆಗುವಾರ ಹುತಾತ್ಮನಾದಾಗ ಅವನ ಬಳಿ ನೆರೂಡಾನ ಕವಿತೆಗಳ ಪುಸ್ತಕ Conto General ಇತ್ತು. ಅಂತಹ ಉತ್ಕಟ ಕಾವ್ಯ ಪ್ರೇಮಿ ಈ 'ಚೆ'...


ಚೆಗುವಾರ ಹುಟ್ಟಿದ್ದ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ. ಹುಟ್ಟುತ್ತಲೇ ಅಸ್ತಮಾ ಹೊತ್ತುಕೊಂಡು ಬಂದಿದ್ದ ಅವನ ನೆರವಿಗೆ ನಿಂತದ್ದು ಆತನ ತಾಯಿ. ʼತಾಯಿಯ ಸೆರಗು ಹಿಡ್ಕೊಂಡೇ ಇರ್ತಾನೆʼ ಅಂತ ನಮ್‌ ಕಡೆಗೆ ಹೇಳ್ತೀವಲ್ಲ, ಹಾಗೆ ಯಾವಾಗಲೂ ತನ್ನ ತಾಯಿಯ ಗೌನ್‌ ಹಿಡಿದುಕೊಂಡು ಬೆಳೆದ ಚೆ, ಅರ್ಜೆಂಟೈನಾದ ಪ್ರಖ್ಯಾತ ಹತ್ತು ವೈದ್ಯರಲ್ಲಿ ಒಬ್ಬನಾದ. ಅಷ್ಟೇ ಜನಾನುರಾಗಿಯೂ, ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದ್ದ ಮಾನವೀಯ ಮನುಷ್ಯ ಚೆ.


ಬಹುತೇಕ ಎಲ್ಲ ಗಂಡಸರುಗಳಿಗೂ ಇದ್ದಂತೆ ಚೆಗುವಾರಾಗೂ ಒಂದು ಆಸೆ ಇತ್ತು. ಅದೇನೆಂದರೆ, ದೇಶವಿದೇಶಗಳನ್ನು ಸುತ್ತಬೇಕು, ಅಲ್ಲಿನ ಊಟ ಸವಿಯಬೇಕು, ಜತೆಗೆ ಅಲ್ಲಿನ ಹೆಣ್ಣುಗಳನ್ನು ಸವಿಯಬೇಕು ಅಂತ. ಈ ಆಸೆಯಿಟ್ಟು ದಕ್ಷಿಣಾಮೆರಿಕಾಕ್ಕೆ ತನ್ನ ಬೈಕ್‌ನಲ್ಲಿ ಆತ್ಮೀಯ ಗೆಳೆಯ ಆಲ್ಬರ್ಟೋನ ಜತೆಗೆ ಟೂರ್‌ ಹೊರಡುವ ಚೆಗುವಾರ, ಟೂರ್‌ ಮುಗಿಸಿ ವಾಪಸ್ಸು ಅರ್ಜೆಂಟೈನಾಗೆ ಬರುವಷ್ಟರಲ್ಲಿ ಅಕ್ಷರಶಃ ಬುದ್ಧನಾಗಿಬಿಟ್ಟುತ್ತಾನೆ. ಅವನನ್ನು ಅಂಥದ್ದೊಂದು ದೊಡ್ಡ ಬದಲಾವಣೆಗೆ ಕಾರಣವಾಗುವುದು ದಕ್ಷಿಣಾಮೆರಿಕಾದಲ್ಲಿದ್ದ ಬಡತನ, ಸ್ವಾತಂತ್ರ್ಯಹೀನತೆ, ಅಧಿಕಾರಶಾಹಿ, ವಸಾಹತುಶಾಹಿಗಳ ಅಟ್ಟಹಾಸ, ದುರಾಡಳಿತ, ಜನರ ಕಣ್ಣಲ್ಲಿದ್ದ ಹಸಿವು, ಆಕ್ರೋಶ!


ಪೆರು, ಬೊಲಿವಿಯಾ, ಚಿಲಿ, ವೆನೆಜುವೆಲಾ, ಕ್ಯೂಬಾ, ಟ್ರೆನಿಡಾಡ್‌, ಈಕ್ವೆಡಾರ್‌, ಕೊಲಂಬಿಯಾ, ಪನಾಮ ಮುಂತಾದ ದೇಶಗಳ ವಿಭಿನ್ನ ವಾತಾವರಣ, ಸನ್ನಿವೇಶಗಳನ್ನು ಎದುರಿಸಿಕೊಂಡು ಅಲೆಯುವ ಚೆಗುವಾರ ನೂರಾರು ಜನಕ್ಕೆ ನೆರವಾಗುತ್ತಾನೆ. ಅಲ್ಲಿನ ಜನರ ಸಂಕಟ ಕಂಡು ಅಕ್ಷರಶಃ ಮರುಗುತ್ತಾನೆ. ಇವರಿಗಾಗಿ ಏನಾದರೂ ಮಾಡಬೇಕೆಂದು ತುಡಿಯುತ್ತಾನೆ. ಮಿಡಿಯುತ್ತಾನೆ. ಕುಷ್ಟರೋಗಿಗಳ ದ್ವೀಪಕ್ಕೆ ನುಗ್ಗಿ, ಅಲ್ಲಿನ ರೋಗಿಗಳನ್ನು ಅಪ್ಪುತ್ತಾನೆ. ಬೇರೆ ವೈದ್ಯರು ಗ್ಲೌಸ್‌ ಹಾಕಿಕೊಂಡು ಮುಟ್ಟಲೂ ಹೆದರುತ್ತಿರುವಾಗ ಚೆಗುವಾರ ಅವರನ್ನು ಯಾವುದೇ ಗ್ಲೌಸ್‌ ಇಲ್ಲದೆ, ಬರಿಗೈಲಿ ತಬ್ಬುತ್ತಾನೆ. ಅವರ ಜತೆಗೆ ತನ್ನ ಬರ್ತಡೆ ಆಚರಿಸಿಕೊಂಡು, ರೋಗಿಗಳೊಂದಿಗೆ ಸಾಮೂಹಿಕವಾಗಿ ಊಟ ಮಾಡುತ್ತಾನೆ. ಪ್ಯಾಬ್ಲೋ ನೆರೂಡಾನ ಒಂದೆರಡು ಪ್ರೇಮಪದ್ಯಗಳನ್ನು ಓದಿ, ಸಾವಿನಂಚಿನಲ್ಲಿರುವ ರೋಗಿಗಳನ್ನು ಸಂತೈಸುತ್ತಾನೆ. ಇದು ಅಸಲಿ ಚೆಗುವಾರಾನ ಬುದ್ಧನರೂಪ!


ಅಲ್ಲಿಂದ ಅವನ ಉದ್ದೇಶ ಬದಲಾಗುತ್ತದೆ. ಸ್ವಾತಂತ್ರ್ಯ ಕಳೆದುಕೊಂಡು ನರಳುತ್ತಿರುವ ಲ್ಯಾಟೀನ್‌ ಅಮೆರಿಕಾ ದೇಶಗಳ ಅದ್ಭುತ ಭೂಖಂಡವನ್ನು ಉಳಿಸಬೇಕಂಬ ಮಹತ್ವಾಕಾಂಕ್ಷೆಯನ್ನು ಹುಟ್ಟಿಸಿಕೊಳ್ಳುತ್ತಾನೆ. ಅಲ್ಲಿಂದ ವಾಪಸ್‌ ತನ್ನ ದೇಶಕ್ಕೆ ಹೊರಟುಹೋಗಿ, ಅಲ್ಲಿರುವ ತನ್ನ ಹೆಂಡತಿ ಮಕ್ಕಳಿಗೆ ಒಂದು ವ್ಯವಸ್ಥೆ ಮಾಡುತ್ತಾನೆ. ಅಷ್ಟರಲ್ಲಾಗಲೇ ಕ್ಯೂಬಾದಲ್ಲಿ ಕ್ರಾಂತಿಯ ಅಲೆ ಎದ್ದಿರುತ್ತದೆ. ಫಿಡಲ್‌ ಕ್ಯಾಸ್ಟ್ರೋ ಎಂಬ ಮತ್ತೊಬ್ಬ ಸ್ವಾತಂತ್ರ್ಯದ ಕನಸುಗಾರ ಆ ಕ್ರಾಂತಿಯನ್ನು ಮುನ್ನಡೆಸುತ್ತಿರುತ್ತಾನೆ. ಕ್ಯಾಸ್ಟ್ರೋನ ಸಂಪರ್ಕ ಸಾಧಿಸಿ, ಅವನ ಸೈನ್ಯ ಸೇರಿಕೊಳ್ಳುವ ಚೆ, ಅಲ್ಲಿರುವ ಸೈನಿಕರ ಆರೋಗ್ಯ ತಪಾಸಣೆ ಮಾಡಿ, ಅಗತ್ಯವಿದ್ದವರಿಗೆ ಚಿಕಿತ್ಸೆ ಕೊಟ್ಟು, ಸನ್ನದ ಮಾಡುತ್ತಾನೆ. ಅಗತ್ಯ ಬಿದ್ದಾಗ ತನ್ನೊಳಗಿನ ಬುದ್ಧನನ್ನು ಪಕ್ಕಕ್ಕಿಟ್ಟು, ಬಂದೂಕನ್ನು ಹೆಗಲಿಗೇರಿಸಿ, ಟ್ರಿಗರ್‌ ಅದುಮಲು ನಿಂತುಬಿಡುತ್ತಾನೆ.


ಫಿಡಲ್‌, ಚೆಗುವಾರನ ಹೋರಾಟದ ಫಲ ಕ್ಯೂಬಾ 1959ರಲ್ಲಿ ದಾಸ್ಯದ ಆಡಳಿತದಿಂದ ಮುಕ್ತಿ ಪಡೆಯುತ್ತದೆ. ಫಿಡಲ್‌ ಕ್ಯೂಬಾದ ಪ್ರಧಾನಿಯಾದರೆ, ಚೆಗುವಾರ ಇಂಡಸ್ಟ್ರಿಯಲ್‌ ಮಂತ್ರಿ ಮತ್ತು ಕ್ಯೂಬಾದ ನ್ಯಾಷನಲ್‌ ಬ್ಯಾಂಕ್‌ ಅಧ್ಯಕ್ಷನಾಗುತ್ತಾನೆ. ಈ ಅವಧಿಯಲ್ಲಿ ಬುದ್ಧನ ನಾಡು ಭಾರತಕ್ಕೂ ಭೇಟಿ ಕೊಟ್ಟು, ನೆಹರೂ ಅವರನ್ನು ಭೇಟಿಯಾಗುತ್ತಾನೆ, ಇಲ್ಲಿನ ರೈತರೊಂದಿಗೆ ಸಂವಾದ ನಡೆಸುತ್ತಾನೆ. ಅಧಿಕಾರದ ದಿನಗಳ ಅವನಿಗೆ ಅದು ಅಪೂರ್ಣ ಎನಿಸತೊಡಗುತ್ತದೆ. ಮತ್ತೇನೋ ಸಾಧಿಸಬೇಕು ಎಂಬ ಹಂಬಲ, ಕ್ಯೂಬಾದಲ್ಲೇ ನಾನು ಕೊಳೆತುಹೋಗುತ್ತೇನೆಂಬ ದಿಗಿಲು ಅವನಿಗೆ ಆವರಿಸಿಕೊಳ್ಳುತ್ತದೆ. ಇರುವ ಎಲ್ಲ ಅಧಿಕಾರಗಳನ್ನು, ಪದವಿಗಳನ್ನು ತ್ಯಜಿಸಿ, ಶಸ್ತ್ರಾಸ್ತ್ರಗಳನ್ನು ಹೆಗಲಿಗೇರಿಸಿಕೊಂಡು ಹೊರಟು ಬಿಡುತ್ತಾನೆ. ಎಲ್ಲಿಗೆ ಗೊತ್ತಾ? ಕ್ಯೂಬಾದ ರೀತಿಯಲ್ಲೇ ದಾಸ್ಯದ ಆಡಳಿತದಲ್ಲಿ ನಲುಗುತ್ತಿರುವ ದೇಶಗಳನ್ನು ಅರಸಿ, ಅವುಗಳಿಗೂ ಮುಕ್ತಿಕೊಡಿಸಬೇಕೆಂಬ ಮಹದಾಸೆಯಿಂದ!


1965ರಲ್ಲಿ ಬೊಲಿವಿಯಾ ದೇಶದ ಗೆರಿಲ್ಲಾ ಪಡೆಗಳ ಜತೆಗೆ ಸೇರಿಕೊಂಡು ಹೋರಾಟ ಮುಂದುವರೆಸುತ್ತಾನೆ. ಅಷ್ಟರಲ್ಲಾಗಲೇ ಅಮೆರಿಕದ ವಸಾಹತುಶಾಹಿಯ ದುರ್ಗುಣ ಮನಸ್ತಿತಿ ಎಚ್ಚೆತ್ತುಕೊಂಡಿರುತ್ತದೆ. ತನ್ನ ಕ್ರೂರ ಸಂಸ್ಥೆ ಸಿಐಎ ಅನ್ನು ಬೊಲಿವಿಯಾಗೆ ಛೂ ಬಿಡುತ್ತದೆ. 1967, ಅಕ್ಟೋಬರ್‌ 9ರಂದು ಚೆಗುವಾರನನ್ನು ಸೆರೆಹಿಡಿದು, ತೀರಾ ಹತ್ತಿರದಿಂದ ಗುಂಡುಹಾರಿಸಿ, ಅತ್ಯಂತ ಕ್ರೂರವಾಗಿ ಕೊಂದುಹಾಕುತ್ತಾರೆ. ಅವನನ್ನು ಕೊಂದ ನಂತರವೂ ದೇಹವನ್ನು ಕ್ಯೂಬಾಗೋ ಅಥವಾ ಚೆಗುವಾರನ ಹುಟ್ಟಿದ ದೇಶ ಅರ್ಜೆಂಟೀನಾಗೋ ಕಳಿಸಿಕೊಡುವುದಿಲ್ಲ. ಕೇವಲ ಬೆರಳನ್ನು ಮಾತ್ರ ಕಳಿಸಿ, ಬರೋಬ್ಬರಿ 30 ವರ್ಷಗಳ ಕಾಲ ಚೆಗುವಾರ ದೇಹವನ್ನು ಇಟ್ಟುಕೊಳ್ಳುವ ಸಿಐಎ ಅಟ್ಟಹಾಸ ಮೆರೆಯುತ್ತದೆ. 


1997ರಲ್ಲಿ ಕ್ಯೂಬಾ ಹವಾನಾಗೆ ಚೆಗುವಾರನ 30 ವರ್ಷಗಳ ಹಳೆಯ ದೇಹವನ್ನು ತಂದಾಗ ಇಡೀ ಕ್ಯೂಬಾ, ಅರ್ಜೆಂಟೀನಾ ಮಾತ್ರವಲ್ಲದೆ ಇಡೀ ದಕ್ಷಿಣಾಮೆರಿಕ ಖಂಡದಲ್ಲಿರುವ ಎಲ್ಲ ದೇಶಗಳೂ ಕಣ್ಣಿರುಗರೆಯುತ್ತವೆ. ಅವನ ಮೇಲೆ ಹಾಡು ಕಟ್ಟುತ್ತವೆ, ಸಿನಿಮಾ ನಿರ್ಮಿಸುತ್ತವೆ. ಡಾಕ್ಯೂಮೆಂಟರಿಗಳು, ಕಥೆಗಳು, ಕವಿತೆ, ಲಾವಣಿಗಳು ಹುಟ್ಟಿಕೊಳ್ಳುತ್ತವೆ.


ಒಂದು ಅಂದಾಜಿನ ಪ್ರಕಾರ 1997ರ ವರೆಗೂ ಯೇಸು ಕ್ರಿಸ್ತನ ಫೋಟೋ ಹೆಚ್ಚಾಗಿ ಸೇಲ್ ಆಗುತ್ತಿತ್ತು! ಯಾವಾಗ ಚೆಗುವಾರ ಎಂಬ ಅದ್ಭುತ ಮನುಷ್ಯನ ಈ ಒಂದು ಫೋಟೋ (ಕೆಳಗಿರುವ ಫೋಟೋ ಮೆಟಾ ಎಐ ನಿಂದ ರಚಿಸಲಾಗಿದೆ) ಪ್ರಕಟವಾಯಿತೋ, ಅದು ಕೆಲವೇ ಕೆಲವು ತಿಂಗಳುಗಳಲ್ಲಿ ಕ್ರಿಸ್ತನನ್ನು ಹಿಂದಿಕ್ಕಿತು... ಟೋಪಿ, ಮಫ್ಲರ್, ಟೀಶರ್ಟ್, ಕಾಫಿ ಲೋಟ, ಬಿಯರ್, ವಿಸ್ಕಿ ಬಾಟೆಲ್‌ಗಳ ಮೇಲೆಲ್ಲಾ ಅಚ್ಚಾಗಿ ಸೇಲ್‌ ಆಗತೊಡಗಿತು. ಅಷ್ಟೇ ಏಕೆ ಆತನ ಮೇಲೆ ಪರಮದ್ವೇಷ ಇಟ್ಟುಕೊಂಡಿರುವ ಅಮೆರಿಕಾ ಕೂಡಾ ಕಾಂಡೋಮ್, ಚಪ್ಪಲಿ, ಅಂಡರ್‌ವೇರ್ ಮುಂತಾದವುಗಳ ಮೇಲೂ 'ಚೆ' ಫೋಟೋಗಳನ್ನು ಮುದ್ರಿಸಿ, ಮಾರಿ ಹಣ ಗಳಿಸಿತು. ಅವನ ಮೇಲೆ ಕೆಟ್ಟದಾಗಿ ಸಿನಿಮಾಗಳನ್ನು ರೂಪಿಸಿ, ಅವನು ಹೆಣ್ಣುಬಾಕ, ರಾತ್ರಿ ಭೋಗಿಸಿದ ಹೆಣ್ಣನ್ನು ಬೆಳಗ್ಗೆ ಎದ್ದ ಕೂಡಲೇ ಗುಂಡಿಟ್ಟು ಕೊಲ್ಲುತ್ತಿದ್ದ, ಹಾಗ್‌ ಮಾಡಿದ್ದ, ಹೀಗ್‌ ಮಾಡಿದ್ದ ಅಂತ ಸುಳ್ಳು ಕತೆಕಟ್ಟಿ ಆತನನ್ನು ಜನಮಾನಸದಲ್ಲಿ ವಿಲನ್‌ ಆಗಿ ಮಾಡುವ ಕುತಂತ್ರವನ್ನು ಅಮೆರಿಕಾ, ಅಮೆರಿಕಾದ ರೀತಿಯ ಮನಸ್ತಿತಿಯ ಬಲಪಂತೀಯ ಖೂಳರು ಇಂದಿಗೂ ಮಾಡುತ್ತಿದ್ದಾರೆ. ಬಾಬಾ ಸಾಹೇಬ ಡಾ ಬಿ ಆರ್‌ ಅಂಬೇಡ್ಕರ್‌ ಹೇಳುವಂತೆ ʼಹುಲಿಗಳ ಇತಿಹಾಸವನ್ನು ನರಿಗಳು ಬರೆದರೆ ಹೇಗೆ?ʼ ಎಂದು ಹೇಳುತ್ತಾರಲ್ಲ, ಹಾಗೆ ಅಮೆರಿಕದ ಮನಸ್ಥಿತಿ!


ಇಂಥ ಚೆಗುವಾರ ಸಾಯುವ ಮುನ್ನ ಈ ಮಾತನ್ನು ಹೇಳುತ್ತಾನೆ "ನನ್ನ ಹೆಂಡತಿಗೆ ಹೇಳಿ ಅವಳು ಮತ್ತೊಂದು ಮದುವೆಯಾಗಲಿ ನನ್ನ ಮಕ್ಕಳಿಗೆ ಹೇಳಿ ಅವರು ನನ್ನ ಹೋರಾಟವನ್ನು ಮುಂದುವರೆಸಲಿ ಮತ್ತು ಕೊನೆಯದಾಗಿ ಅಲ್ಲಿ ನಿಂತು ನನ್ನದೆಗೆ ಗುರಿಯಿಟ್ಟಿರುವ ನಿಮ್ಮ ಸೈನಿಕನಿಗೆ ಹೇಳಿ ಅವನ ಗುರಿ ತಪ್ಪದಿರಲಿ” ಎನ್ನುತ್ತಾನೆ. ಇದು ಚೆಗುವಾರ, ಇದು ಚೆಗುವಾರನಿಗಿದ್ದ ಮಾತೃಹೃದಯ, ಇದು ಚೆಗುವಾರ ಹೆಣ್ಣುಮಕ್ಕಳ ಬಗ್ಗೆ ಇಟ್ಟಿದ್ದ ಅದಮ್ಯ ಮಾನವೀಯತೆ, ಇದು ತನ್ನ ತಾಯಿಯ ಗೌನ್‌ ಹಿಡಿದು ಬೆಳೆದ ಚೆಗುವಾರ ಹೆಣ್ಣುಮಕ್ಕಳನ್ನು ಗೌರವಿಸುತ್ತಿದ್ದ ರೀತಿ. ಇದು ಚೆಗುವಾರನ ಎದೆಗಾರಿಕೆ. ಅಂದಹಾಗೆ ಚೆ ಅಂದ್ರೆ, ಪ್ರೀತಿ, ಗುವೆರಾ ಅಂದರೆ ಮನುಷ್ಯ.. ಒಟ್ಟಿನಲ್ಲಿ ಈತ ಪ್ರೀತಿಯುಳ್ಳ ಮನುಷ್ಯ, ನಮ್ಮ ಎದೆಯಿಂದ ಎಂದಿಗೂ ಆಚೀಚೆ ಕದಲದವ!

ಅಂಥ ಚೆಗುವಾರನಿಗೊಂದು ಕೃತಜ್ಞತೆ, ಪ್ರೀತಿ ಮತ್ತು ಅಪ್ಪುಗೆ ಅಷ್ಟೇ ಈ ಕ್ಷಣಕ್ಕೆ. ಆತನ ಹುಟ್ಟಿದ ದಿನಕ್ಕೆ ಹೀಗೊಂದು ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸುತ್ತಾ, ನಮಸ್ಕಾರ...

No comments:

Powered by Blogger.