Header Ads

Breaking News
recent

ಮಯ್ಯತ್ :

#ಮಯ್ಯತ್

ನನ್ನ ಸಾವಿನ ನಂತರ
ನನ್ನ ಹೆಣಕ್ಕೆ ಹೂಗಳಿಂದ
ಸಾಲು ಸಾಲು ಹಚ್ಚಿ 
ಸನ್ಮಾನಿಸಲಾಗುತ್ತದೆ
ನಾನಂದುಕೊಂಡೇ ಹುಟ್ಟಿದ
ಪದವಿಗೆ ಕೊನೆ ಸತ್ಕಾರವೆಂದು

ಯಾರೋ ಅಳುತ್ತ ಬೀಳ್ಕೊಡುತ್ತಿದ್ದರು
ಇನ್ನ್ಯಾರೋ ತನ್ನ ಜೀಬಿನಿಂದ 
ಹಣವನ್ನು 'ಖಫ್ಹನ್'ಗೆ ಕೊಡುತ್ತಿದ್ದರು
'ದಫ್ಹನ್' ಮಾಡಲಿಕ್ಕೆ ಸಾವಿರ  ಮಂದಿ ಮಣ್ಣಹಿಡಿದು ಕಾಯುತ್ತಿದ್ದರು

ಸ್ಮಶಾನಕ್ಕೋ... ಒಂದು ಕಳೆ ಬಂದಿತ್ತು
ನನ್ನ 'ಜನಾಜಾ' ಸಾಗಿಸುವಾಗ
ಕಲ್ಮಾದ ಸ್ತುತಿ ರಿಂಗಣಿಸುತ್ತಿತ್ತು
ನನ್ನ ಕಿವಿ ಕೇಳುತ್ತಿರಲಿಲ್ಲ
'ಆಖೀರ್' ಅಂದರೆ ಹಾಗೆ
ಸದಾ ಮೌನವಾಗಿರುತ್ತೆಂದು
ಸತ್ತ ನಂತರವೇ ಅನಿಸಿದ್ದು

'ದುನಿಯಾ'ದ ಕೋಣೆಯಲ್ಲಿ
'ಹಖೀಕತ್ತಿ'ನ ಪದವಿಗಳು
ಶ್ಯಾಲು ಹಾರ ತುರಾಯಿಗಳು
ಬಿರುದು ಸನ್ಮಾನಗಳು ಶೋಕೇಸಿನ ಕಟೌಟುಗಳು ಉಸಿರು ನಿಲ್ಲುವತನ ಮಾತ್ರ...

ಹೊರಟೆ ಹೆಸರಿಲ್ಲದೆ
ಆತ್ಮವಿಲ್ಲದ ದೇಹದೊಂದಿಗೆ
ಬರಿ ಬಿಳಿ ಖಫ್ಹನ್ ಸುತ್ತಿಕೊಂಡು
ಕತ್ತಲ ಗೋರಿಯಲ್ಲಿ ದೀಪವಿಲ್ಲದೆ
ಸುತ್ತಲೂ ಮಣ್ಣು ವಾಸನೆಯೂ ಇಲ್ಲದೆ

ಹೇಳಬೇಕೆಂದರೆ ಕೇಳುವರಿಲ್ಲ
ಹೇಳುತ್ತೇನೆ ಎಂದಾಗ
ಗೌರವ ಕುಂದುಹೋಗುವ
ಕೊರತೆ ಅಹಂನಿಂದ ಬೆಳೆಯಿತು
ಈಗ ಬರಿ ಗೆದ್ದಲುಗಳ ಮಾತು
ದೇಹ ಛಿದ್ರವಾಗಿಸಿ 
'ದೌಲತ್' ತಿನ್ನುತ್ತ ಕಸಿಯುತ್ತಿವೆ

ಹೆತ್ತವರು ಹೆಗಲು ಕೊಟ್ಟವರು
ಅದೇ ಮಾಮೂಲಿ ಸಂತೆ ಮಾಡುತ್ತಿದ್ದಾರೆ
ಮೂರು ದಿನ ದುಃಖಿಸಿ
ಮರೆತು 'ಮಟನ್' ತರಿಸಿ
ತಿನ್ನುತ್ತಿದ್ದಾರೆ

ಇದಷ್ಟೇ ಈ ಜಗದ ನಿಯಮ
ಇದ್ದಷ್ಟೇ ಬದುಕು ಸ್ವಲ್ಪ ಸಮಯ
ಜನ ಕೊಡೊ ಹಿಡಿ ಮಣ್ಣು 
ಬೇಡವೆನ್ನಲಾಗದು
ಬದುಕಿದ್ದಾಗ ಏನೂ ಕೊಡದವರು
ಇಂದು ಮಣ್ಣಾದರು ಕೊಡುತ್ತಿದ್ದಾರೆ
ಅದಕ್ಕೆ ಸಿಕ್ಕ ಸಂತೋಷವೆಂದು
ಕಣ್ಣು ಕತ್ತಲೆಯಲ್ಲಿ ಮುಚ್ಚಿದೆ.

----- ®@@ಫ಼ಿ 

No comments:

Powered by Blogger.